January 15, 2026

ತೆರೆಯದ ಗೋವಿನ ಜೋಳ ಖರೀದಿ ಕೇಂದ್ರ 2ನೇ ದಿನಕ್ಕೆ ರೈತರ ಧರಣಿ ಸತ್ಯಾಗ್ರಹ

ಲಕ್ಷ್ಮೇಶ್ವರ,:ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರುವ ಸರ್ಕಾರಗಳು ಇದೀಗ ಸಂಕಷ್ಟದಲ್ಲಿರುವ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಬೆಳೆವಿಮೆ- ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಗಳು ಪಕ್ಷಾತೀತವಾಗಿ ಕಳೆದ ೨ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.. .

ರೈತರ ಕೂಗು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಅದಕ್ಕಾಗಿ ಈ ಹೋರಾಟದ ಸ್ವರೂಪ ಇನ್ನೂ ತೀವ್ರಗೊಳಿಸಬೇಕಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೊರಲ ಬೇಡಿಕೆ/ ಮನವಿಯಾಗಿದೆ.

“ರೈತರ ಬೇಡಿಕೆ ಈಡೇರಿಕೆ, ರೈತರ ಸಂಕಷ್ಟ ಪರಿಹಾರ ಮತ್ತು ರೈತ ಕಲ್ಯಾಣಕ್ಕಾಗಿ ಧರಣಿ ನಿರತ ಸ್ಥಳದಲ್ಲಿ ಹೋಮ ಪೂಜೆ”

ಈ ವರ್ಷ ಮುಂಗಾರಿನ ಹೆಸರು, ಉಳ್ಳಾಗಡ್ಡಿ, ಶೇಂಗಾ ಸೇರಿ ಬಹುತೇಕ ಬೆಳೆಗಳೆಲ್ಲ ಹಾಳಾಗಿವೆ. ಇದೀಗ ರೈತರ ಬದುಕಿಗೆ ಆಸರೆಯಾಗಿರುವ ಗೋವಿನ ಜೋಳದ ಬೆಲೆ ಪಾತಾಳಕ್ಕಿಳಿದಿದೆ. ಹಿಂಗಾರಿಯೂ ಅಷ್ಟಕ್ಕಷ್ಟೇ..ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಈ ನಿಟ್ಟಿನಲ್ಲಿ ಬಿತ್ತಿದ ಬೆಳೆಗಳು ಯಾವುದೇ ತೊಂದರೆಯಿಲ್ಲದೆ ಉತ್ತಮವಾಗಿ ರೈತರ ಕೈ ಸೇರಬೇಕು. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಸಕಾಲಿಕ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಪ್ರಾರಂಭವಾಗಬೇಕು. ಬೆಳೆಹಾನಿ- ಬೆಳೆವಿಮೆ ಸಿಗಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ೨ ದಿನಗಳಿಂದ ಲಕ್ಷ್ಮೇಶ್ವರದ ಶಿಗ್ಲಿ ನಾಕಾದಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಸಿಗಬೇಕು. ಸರ್ಕಾರಗಳಿಗೆ ರೈತಪರ ನಿಲುವು ತಾಳುವ ಬುದ್ದಿಯನ್ನು ದೇವರು ಕರುಣಿಸಲಿ. ರೈತರ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಧರಣಿ ನಿರತ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ವಿಶೇಷ “ಹೋಮ” ಕಾರ್ಯಕ್ರಮವನ್ನು ಲಕ್ಷ್ಮೇಶ್ವರದ ಶ್ರೀ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಮುರಘೇಂದ್ರಸ್ವಾಮಿ ಹಿರೇಮಠ ಅವರ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲ ರೈತ ಬಾಂಧವರು ಹೋಮ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತಪರ ಹೋರಾಟದ ಸಂಘಟನೆಗಳು ವಿನಂತಿಸಿಕೊಂಡಿವೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902277588, 9880707587, 9008787586